ಪಾರಿಜಾತ
ಓಲಿಯೇಸೀ ಕುಟುಂಬಕ್ಕೆ ಸೇರಿದ ಅಲಂಕಾರ ಸಸ್ಯ. ನಿಕ್ಟ್ಯಾಂತಸ್ ಆರ್ಬರ್-ಟ್ರಸ್ಟಿಸ್ ಇದರ ಶಾಸ್ತ್ರೀಯ ಹೆಸರು.
ಪಾರಿಜಾತದ ತವರು ಭಾರತ. ಹಿಮಾಲಯದ ತಪ್ಪಲಿನಿಂದ ಹಿಡಿದು ತಮಿಳುನಾಡಿನವರೆಗೆ ಭಾರತಾದ್ಯಂತ ಕಾಣದೊರೆಯುತ್ತದೆ.
ಇದು ಒರಟು ಜಾತಿಯ ದೊಡ್ಡ ಗಾತ್ರದ ಪೊದೆ ಅಥವಾ ಚಿಕ್ಕಮರ. ಸುಮಾರು 10 ಮೀಟರ್ ಎತ್ತರಕ್ಕೆ ಬೆಳೆಯುವುದುಂಟು. ಕಾಂಡದ ತೊಗಟೆ ಒರಟಾಗಿದೆ. ತೊಗಟೆಯ ಬಣ್ಣ ಬೂದು ಅಥವಾ ಬಿಳಿ ಮಿಶ್ರ ಹಸಿರು. ಎಲೆಗಳು ಸರಳ ಅಭಿಮುಖ ಮಾದರಿಯಲ್ಲಿ ಜೋಡಣೆಗೊಂಡಿವೆ. ಎಲೆಯ ಅಂಚು ಗರಗಸದ ಹಲ್ಲುಗಳಂತಿವೆ. ಎಲೆಯ ಮೇಲ್ಭಾಗ ಒರಟಾಗಿದೆ. ನರವಿನ್ಯಾಸ ಸ್ಪಷ್ಟಗೋಚರ. ಎಲೆಗಳು ಏಪ್ರಿಲ್-ಮೇ ತಿಂಗಳುಗಳಲ್ಲಿ ಉದುರಿಹೋಗಿ ಜೂನ್ ವೇಳೆಗೆ ಹೊಸ ಎಲೆಗಳು ಮೂಡುತ್ತವೆ.

ಹೂಗಳು ಹೆಚ್ಚು ಕಡಿಮೆ ಮಲ್ಲಿಗೆ ಹೂವಿನ ಹಾಗೆ ಇವೆ. ರೆಂಬೆಗಳ ತುದಿಯಲ್ಲಿ ಮೂರು ಕವಲುಗಳಾಗಿರುವ ಹೂಗೊಂಚಲುಗಳಲ್ಲಿ ಅರಳುವುವು. ಪ್ರತಿ ಗೊಂಚಲಿನಲ್ಲಿ 3-7 ಹೂಗಳುಂಟು. ದಳಗಳ ಬಣ್ಣ ಬಿಳಿ. ಪರಸ್ಪರ ಕೂಡಿಕೊಂಡಿರುವ ಇವುಗಳ ಕಂಠ ತಿಳಿಕಿತ್ತಳೆ ಬಣ್ಣಕ್ಕಿವೆ. ದಳಗಳಿಗೆ ನವುರಾದ ಸುವಾಸನೆ ಇದೆ. ಹೂ ಬಿಡುವ ಕಾಲ ಆಗಸ್ಟ್-ಮಾರ್ಚ್ ತಿಂಗಳುಗಳು. ಹೂಗಳು ಸಂಜೆ ಹೊತ್ತಿನಲ್ಲಿ ಅರಳಿ ಬೆಳಗಿನ ಹೊತ್ತಿನಲ್ಲಿ ಸೂರ್ಯೋದಯದ ವೇಳೆಗೆ ಉದುರುವುವು. ಕಾಯಿ ಚಪ್ಪಟೆಯಾಗಿದೆ. ಪ್ರತಿ ಕಾಯಿಯಲ್ಲಿ ಎರಡು ಬೀಜಗಳುಂಟು.

ಪಾರಿಜಾತವನ್ನು ಬೀಜಗಳಿಂದಲೂ ಕಾಂಡ ತುಂಡುಗಳಿಂದಲೂ ವೃದ್ಧಿಪಡಿಸಬಹುದು. ಇದಕ್ಕೆ ಎಂಥ ಮಣ್ಣಿನಲ್ಲಾದರೂ ಬೆಳೆಯುವ ಗುಣ ಉಂಟು.

ಪಾರಿಜಾತವನ್ನು ಅಲಂಕಾರಕ್ಕಾಗಿ ಬೆಳೆಸುವುದಲ್ಲದೆ ಇದರಿಂದ ಮಲ್ಲಿಗೆ ಎಣ್ಣೆಯಂಥ ಎಣ್ಣೆಯನ್ನೂ ಪಡೆಯಲಾಗುತ್ತದೆ. ಆವಿ ಆಸವೀಕರಣ ವಿಧಾನದಿಂದ ಎಣ್ಣೆಯನ್ನು ತೆಗೆಯುವರು. ಅಲ್ಲದೆ ಹೂವಿನ ಕೊಳವೆಯಿಂದ ನಿಕ್ಟ್ಯಾಂತಿನ್ ಎಂಬ ಬಣ್ಣವನ್ನು ಕೂಡ ಪಡೆಯುವುದಿದೆ. ರೇಷ್ಮೆಗೆ ಬಣ್ಣ ಹಾಕಲು ಇದನ್ನು ಉಪಯೋಗಿಸಲಾಗುತ್ತದೆ. 
ಪಾರಿಜಾತಕ್ಕೆ ಔಷಧೀಯ ಗುಣಗಳೂ ಉಂಟು. ಎಲೆಗಳಿಗೆ ಪಿತ್ತಹರ ಮತ್ತು ಕಫಹರ ಗುಣ ಇದೆ. ಸಂಧಿವಾತ ಮತ್ತು ಜ್ವರ ನಿವಾರಣೆಗೆ ಇದನ್ನು ಬಳಸುವುದುಂಟು. ಎಲೆಯ ಕಷಾಯ ಕಟಿಸೂಲೆಗೆ ಒಳ್ಳೆಯ ಮದ್ದು ಎನ್ನಲಾಗಿದೆ. ಎಲೆಗಳ ರಸ ಘಾಟು ಹಾಗೂ ಕಹಿ. ಇದನ್ನು ಪಿತ್ತಹರ, ವಿರೇಚಕ, ಮೂತ್ರೋತ್ತೇಜಕ ಹಾಗೂ ಸ್ವೇದಕಾರಕವಾಗಿ ಬಳಸುವುದಿದೆ. ತೊಗಟೆಗೂ ಕಫಹರ ಗುಣ ಉಂಟು.

ಪಾರಿಜಾತದ ತೊಗಟೆಯನ್ನು ಚರ್ಮ ಹದಗಾರಿಕೆಯಲ್ಲಿ ಉಪಯೋಗಿಸಲಾಗುತ್ತದೆ. ಚೌಬೀನೆಯನ್ನು ಮೇಲ್ಚಾವಣಿಯ ಚೌಕಟ್ಟಿನ ತಯಾರಿಕೆಗೆ ಬಳಸುವುದುಂಟು. ಎಳೆಯ ರೆಂಬೆಗಳಿಂದ ಬುಟ್ಟಿ ಹೆಣೆಯುತ್ತಾರೆ.
(ಎಸ್.ಐ.ಎಚ್.)

ಪುರಾಣಗಳ ಪ್ರಕಾರ ಪಾರಿಜಾತ ಒಂದು ದೇವರು. ಐದು ಕಲ್ಪವೃಕ್ಷಗಳ ಪೈಕಿ ಒಂದು. ಮಂದಾರ ಕೋವಿದಾರ ಎಂದೂ ಇದನ್ನು ಕರೆವುದಿದೆ. ಕ್ಷೀರಸಾಗರಮಥನ ಕಾಲದಲ್ಲಿ ಎದ್ದು ಬಂತು. ಇದರ ಸಾನ್ನಿಧ್ಯದಿಂದ ನೋವು ಸಾವು ಉಂಟಾಗುವುದಿಲ್ಲ. ಮುಪ್ಪು ಆವರಿಸುವುದಿಲ್ಲ. ಹರೆಯ ಹಿಂಗುವುದಿಲ್ಲ, ಕಾಂತಿ ಕುಂದುವುದಿಲ್ಲ. ಇನ್ನೊಂದು ಮೂಲದ ಪ್ರಕಾರ ಕಶ್ಯಪ ಋಷಿ ತನ್ನ ಹೆಂಡತಿಯ ಆಶೆಗಳ ಈಡೇರಿಕೆಗಾಗಿ ಕಲ್ಪವೃಕ್ಷದ ಸಾರದಿಂದ ಈ ವೃಕ್ಷವನ್ನು ಸೃಷ್ಟಿಸಿದನಂತೆ. ಇದಕ್ಕೆ ಮೂರು ಶಾಖೆಗಳಿವೆ. ಒಂದು ಶಾಖೆಯಲ್ಲಿ ಪಾರಿಜಾತ ಇನ್ನೊಂದರಲ್ಲಿ ಬಗೆಬಗೆಯ ಬಣ್ಣದ ಹೂಗಳೂ ಮೂರನೆಯದರಲ್ಲಿ ಸುಗಂಧದ ಕಮಲದ ಹೂಗಳೂ ಅರಳುತ್ತವೆ. ಈ ವೃಕ್ಷಕ್ಕೆ ಕಶ್ಯಪರನ್ನು ಕಟ್ಟಿ ಅದಿತಿ, ಇಂದ್ರನನ್ನು ಕಟ್ಟಿ ಶಚಿ, ಚಂದ್ರನನ್ನು ಕಟ್ಟಿ ರೋಹಿಣಿ, ಕುಬೇರನನ್ನು ಕಟ್ಟಿ ಋದ್ಧಿ ಇವರು ನಾರದನಿಗೆ ದಾನ ಕೊಟ್ಟು ಅಪಾರ ಸಂಪತ್ತನ್ನೂ ಸೌಭಾಗ್ಯವನ್ನೂ ಪಡೆದರು. ಶ್ರೀಕೃಷ್ಣ ಇದನ್ನು ದೇವಲೋಕದಿಂದ ಅಪಹರಿಸಿ ತಂದು ವ್ರತ ಹಿಡಿದ ಸತ್ಯಭಾಮೆಯ ಮನೆಯಲ್ಲಿ ನೆಟ್ಟ. ಗಿಡ ಅವಳ ಅಂಗಳದಲ್ಲಿದ್ದರೂ ಹೂಗಳು ಮಾತ್ರ ರುಕ್ಮಿಣಿಯ ಅಂಗಳದಲ್ಲಿ ಬೀಳುತ್ತಿದ್ದುದರಿಂದ ಸವತಿಯರ ನಡುವೆ ಕಲಹ ಏರ್ಪಟ್ಟಿತ್ತು. ಇದೇ ಶ್ರೀ ಕೃಷ್ಣಪಾರಿಜಾತವೆಂಬ ಜನಪ್ರಿಯ ನಾಟಕದ ವಸ್ತು. ಈ ಕಥೆ ಭಾಗವತ ಹಾಗೂ ಹರಿವಂಶಗಳಲ್ಲಿ ಬಂದಿದೆ. 
(ಎಸ್.ಎಸ್.ಜೆಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ